ಸಂಕೇಶ್ವರ - ಭಾರತದ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಒಂದು ಪಟ್ಟಣ ಮತ್ತು ಪ್ರಮುಖ ವ್ಯಾಪಾರ ಮತ್ತು ಕೈಗಾರಿಕಾ ಕೇಂದ್ರ. ಹುಕ್ಕೇರಿಯ ವಾಯವ್ಯಕ್ಕೆ ಹುಕ್ಕೇರಿ-ನಿಪ್ಪಾಣಿ ಮಾರ್ಗ ಮಧ್ಯದಲ್ಲಿ ಹುಕ್ಕೇರಿಗೆ 13 ಕಿಮೀ ದೂರದಲ್ಲೂ ಬೆಳಗಾಂವಿಯ ಉತ್ತರಕ್ಕೆ 48 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 32,511.

	ಇಲ್ಲಿ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಿದೆ. ಸೀರೆ, ಪಾದರಕ್ಷೆ, ತಂಬಾಕಿನ ಜರದ ತಯಾರಾಗುತ್ತವೆ. ಇಲ್ಲಿಂದ ರಫ್ತಾಗುವ ಸರಕುಗಳಲ್ಲಿ ಸಕ್ಕರೆ, ಬೆಲ್ಲ, ಕಡಲೆಕಾಯಿ, ಎಣ್ಣೆ, ಹತ್ತಿ, ಸಂಬಾರ ಜಿನಸು ಮುಖ್ಯವಾದವು.

	ಇಲ್ಲಿ ಜಕಣಾಚಾರಿ ಕಟ್ಟಿದನೆಂದು ಹೇಳಲಾದ ಶಂಕರಲಿಂಗೇಶ್ವರ ದೇವಾಲಯವಿದೆ. ಶಿವರಾತ್ರಿ ಸಮಯದಲ್ಲಿ ನಡೆಯುವ ಇಲ್ಲಿನ ಜಾತ್ರೆ ಮತ್ತು ರಥೋತ್ಸವ ಪ್ರಸಿದ್ಧ. ಇಲ್ಲಿ 12 ಮತ್ತು 13ನೆಯ ಶತಮಾನಗಳ ಮೂರು ಶಿಲಾಶಾಸನಗಳಿವೆ. ಅವುಗಳಲ್ಲಿ ನಾರಾಯಣಸ್ವಾಮಿ ಗುಡಿ ಬಳಿಯ ಶಾಸನ ರಟ್ಟದೊರೆ ನಾಲ್ವಡಿ ಕಾರ್ತವೀರ್ಯನಿಗೆ(1199-1221) ಸಂಬಂಧಪಟ್ಟದ್ದು. ಈ ಶಾಸನದಲ್ಲಿ ಅವನನ್ನು ಮಹಾಮಂಡಲೇ ಶ್ವರನೆಂದು ವರ್ಣಿಸಿ ಅವನು ವೇಣುಗ್ರಾಮದಲ್ಲಿ (ಬೆಳಗಾಂವಿ) ಆಳುತ್ತಿದ್ದನೆಂದು ಸೂಚಿಸಲಾಗಿದೆ. ಇಲ್ಲಿ ಒಂದು ಪ್ರಾಚೀನ ಸ್ಮಾರ್ತ ಮಠವಿದೆ. ಸಂಕೇಶ್ವರ ಚಾರಿತ್ರಿಕವಾಗಿ ನಮ್ಮ ಗಮನಕ್ಕೆ ಬರುವುದು 1488ರಲ್ಲಿ. ಆ ವರ್ಷ ಬಹಮನೀ ರಾಜ್ಯದ ಕೊಂಕಣ ಪ್ರಾಂತಾಧಿಕಾರಿ ಬಹದ್ದೂರ್ ಗಿಲಾನಿ ದಂಗೆಯೆದ್ದು, ಬೆಳಗಾಂವಿ ಮತ್ತು ಗೋವಾ ಪ್ರದೇಶಗಳನ್ನು ಆಕ್ರಮಿಸಿ, ಸಂಕೇಶ್ವರದಲ್ಲಿ ತನ್ನ ಬೀಡನ್ನು ಸ್ಥಾಪಿಸಿ ಅಲ್ಲಿ ಕೋಟೆಯನ್ನು ಕಟ್ಟಲಾರಂಭಿಸಿದ. ಕೋಟೆಯ ರಚನೆ ಮುಗಿಯುವುದರ ಒಳಗೆ ಬಹಮನೀ ಅರಸ (1482-1518) ದಂಡೆತ್ತಿ ಬಂದು ಸಂಕೇಶ್ವರಕ್ಕೆ ಮುತ್ತಿಗೆ ಹಾಕಿದ. ಗಿಲಾನಿ ಸೋತು ಅವನಿಗೆ ಶರಣಾಗತನಾದ. 1659ರಲ್ಲಿ ಸಂಕೇಶ್ವರ ಶಿವಾಜಿಯ ಅಧೀನವಾಯಿತು. ನಾಲ್ಕನೆಯ ಮೈಸೂರು ಯುದ್ಧದ (1799) ತರುವಾಯ ಬ್ರಿಟಿಷ್ ಸರ್ಕಾರ ಕರ್ನಾಟಕವನ್ನು ವಿಭಜಿಸಿ ಪ್ರಾಂತಗಳನ್ನು ರಚಿಸಿದಾಗ ಸಂಕೇಶ್ವರ ಮುಂಬಯಿ ಆಧಿಪತ್ಯದ ಬೆಳಗಾಂವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿಗೆ ಸೇರಿತು. ಭಾರತ ಸ್ವಾತಂತ್ರ್ಯಗಳಿಸಿ ರಾಜ್ಯಗಳ ಪುನರ್ವಿಂಗಡಣೆ ಯಾದಾಗ (1956) ಸಂಕೇಶ್ವರ ಕರ್ನಾಟಕ ರಾಜ್ಯದ ಬೆಳಗಾಂವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿಗೆ ಸೇರಿತು.	
	
			(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ